ಮಂಗಳೂರು : ಅರೆಹೊಳೆ ಪ್ರತಿಷ್ಠಾನವು ಕಳೆದ ನಾಲ್ಕು ವರ್ಷಗಳಿಂದ ಪ್ರತೀ ವರ್ಷ ನೀಡುವ ರಾಜ್ಯ ಮಟ್ಟದ ಅರೆಹೊಳೆ ರಂಗಭೂಮಿಯ 2019ನೇ ಸಾಲಿನ ಪ್ರಶಸ್ತಿಗೆ ಪಾದುವಾ ಕಾಲೇಜಿನ ಪ್ರಾಂಶುಪಾಲ, ರಂಗ ಕರ್ಮಿ ಫಾದರ್ ಆಲ್ವಿನ್ ಸೆರಾವೋ ಅವರನ್ನು ಆಯ್ಕೆ ಮಾಡಲಾಗಿದೆ.

 

 

ಈಗಾಗಲೇ ಅನೇಕ ಕೊಂಕಣಿ ನಾಟಕಗಳನ್ನು ರಚಿಸಿರುವ ಫಾದರ್ ಆಲ್ವಿನ್ ಸೆರಾವೋ ಅವರು ಪಾದುವಾ ಕಾಲೇಜಿನಲ್ಲಿ ಪಾದುವಾ ರಂಗ ಅಧ್ಯಯನ ಕೇಂದ್ರದ ಮೂಲಕ ವಿದ್ಯಾರ್ಥಿಗಳಿಗೆ ನಿರಂತರ ರಂಗ ಚಟುವಟಿಕೆಗಳನ್ನು ಹಮ್ಮಿಕೊಂಡು ರಂಗ ಶಿಕ್ಷಣ ನೀಡುತ್ತಿದ್ದಾರೆ. ಕನ್ನಡ, ಕೊಂಕಣಿ, ತುಳು ಹೀಗೆ ಎಲ್ಲಾ ಭಾಷೆಯ ನಾಟಕಗಳನ್ನು ಪ್ರಯೋಗಿಸವುದಕ್ಕೆ ವೇದಿಕೆ ಕಲ್ಪಿಸುವ ನುರಿತ ಸಂಘಟಕರಾಗಿ, ಮಂಗಳೂರಿನ ಮಟ್ಟಿಗೆ ಇಲ್ಲವಾದ ರಂಗಭೂಮಿಯ ಕೊರತೆಯನ್ನು ಪಾದುವಾ ಥಿಯೇಟರ್ ಹಬ್ ಎಂಬ ಸಮಾನ ಮನಸ್ಕ ಸಂಘಟಕರನ್ನು ಸೇರಿಸಿ, ಪ್ರತೀ ವಾರಾಂತ್ಯದಲ್ಲಿ ನಾಟಕಗಳನ್ನು ಪ್ರದರ್ಶಿಸುವುದರ ಮೂಲಕ ರಾಜ್ಯಕ್ಕೇ ಮಾದರಿ ಎಂಬ ಕೆಲಸ ಮಾಡುತ್ತಿದ್ದಾರೆ. ಲೋಗೋಸ್ ಥಿಯೇಟರ್ ಗ್ರೂಪ್ ಎಂಬ ರಂಗ ಸಂಘಟನೆಯನ್ನೂ ಆರಂಭಿಸುವ ಮೂಲಕ ಅನೇಕ ಹೊಸ ರೀತಿಯ ಕೊಂಕಣಿ ನಾಟಕಗಳನ್ನು ನಿರ್ಮಿಸಿ ಪ್ರದರ್ಶಿಸಿದ ಇವರು ಬೇರೆ ಬೇರೆ ತಂಡ, ಸಂಘಟಕರಿಗೂ ವೇದಿಕೆ ಕಲ್ಪಿಸುವ ಮೂಲಕ ರಂಗಭೂಮಿಗೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ.

ನಾಟಕಕಾರ, ಸಂಘಟಕ, ರಂಗ ತಜ್ಞ ರಂಗ ಕರ್ಮಿಯಾಗಿ ಪಾದುವಾ ಕಾಲೇಜನ್ನು ಜಿಲ್ಲೆಯ ರಂಗ ಕೇಂದ್ರವನ್ನಾಗಿ ನಿರ್ಮಿಸಿದ ಇವರ ಒಟ್ಟೂ ಸಾಧನೆಯನ್ನು ಗುರುತಿಸಿ ಈ ವರ್ಷದ ಅರೆಹೊಳೆ ರಂಗಭೂಮಿ ಪ್ರಶಸ್ತಿಯನ್ನು ದಿನಾಂಕ 15.12.2019ರಂದು ಪಾದುವಾ ಕಾಲೇಜಿನ ಬಯಲು ರಂಗಮಂದಿರದಲ್ಲಿ ನಡೆಯಲಿರುವ ಅರೆಹೊಳೆ ರಂಗ ಹಬ್ಬದ ಮೂರನೆಯ ದಿನ ಪ್ರದಾನಿಸಲಾಗುವುದು. ಇದುವರೆಗೆ ಈ ಪ್ರಶಸ್ತಿಯನ್ನು ಸುಳ್ಯದ ರಂಗ ಮನೆಯ ಜೀವನರಾಂ ಸುಳ್ಯ, ರಂಗಾಯಣದ ಪ್ರಮಿಳಾ ಬೇಂಗ್ರೆ ಹಾಗೂ ನೀನಾಸಂನ ಬಿ ಆರ್ ವೆಂಕಟರಮಣ ಐತಾಳರಿಗೆ ನೀಡಲಾಗಿತ್ತು. ಪ್ರಶಸ್ತಿ ಹತ್ತು ಸಾವಿರ ರೂಪಾಯಿಗಳ ಮೊತ್ತ, ಫಲಕಗಳನ್ನು ಒಳಗೊಂಡಿರುತ್ತದೆ ಎಂದು ಅರೆಹೊಳೆ ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.